Days of Remembrance

Kannada · Bahá'u'lláh

Ziyarat-Namih (Tablet of Visitation) BH02307

Add range:

*(ಈಗ ಶಾಸನವನ್ನು ಬಾಬ್ ಹಾಗೂ Baha’u’llah ರವರ ಪವಿತ್ರ ಸಮಾಧಿಗಳ ಬಳಿ ಪಠಿಸಲಾಗುತ್ತದೆ. ಆಗಾಗ್ಗೆ ಅವರ ಜಯಂತಿಗಳ ಸ್ಮರಣೋತ್ಸವದಲ್ಲೂ ಇದನ್ನು ಉಪಯೋಗಿಸಲಾಗುತ್ತದೆ.) ಓ ಮಹಾವೈಭವದ ಅವತಾರವೇ ಮತ್ತು ಚಿರಂತನತೆಯ ದೊರೆಯೇ ಹಾಗೂ ಭೂಮಿ ಮತ್ತು ಸ್ವರ್ಗದಲ್ಲಿರುವವರೆಲ್ಲರ ಪ್ರಭುವೇ, ನಿನ್ನ ಪರಮ ಶ್ರೇಷ್ಠ ಆತ್ಮದಿಂದಲೇ ಉದಯಿಸಿರುವ ಪ್ರಶಂಸೆ ಹಾಗೂ ನಿನ್ನ ಪ್ರಕಾಶಮಾನವಾದ ಸೌಂದರ್ಯದಿಂದ ಕಂಗೊಳಿಸಿರುವ ವೈಭವವು ನಿನ್ನ ಮೇಲಿರಲಿ! ನಿನ್ನಿಂದಲೇ ದೇವರ ಪ್ರಭುತ್ವ ಮತ್ತು ಆತನ ಸಾಮ್ರಾಜ್ಯ, ಹಾಗೂ ದೇವರ ಭವ್ಯತೆ ಮತ್ತು ಆತನ ಗಾಂಭೀರ್ಯ ಪ್ರಕಟಗೊಂಡಿರುವವೆಂದೂ, ಹಾಗೂ ನಿನ್ನ ಬದಲಾಯಿಸಲಾಗದ ಶಾಸನದ ಸ್ವರ್ಗದಲ್ಲಿ ಪುರಾತನ ವೈಭವದ ದಿನ ನಕ್ಷತ್ರಗಳು ತಮ್ಮ ಕಾಂತಿಯನ್ನು ಪಸರಿಸಿವೆಯೆಂದೂ ಹಾಗೂ ಅದೃಶ್ಯ ಸೌಂದರ್ಯವು ಸೃಷ್ಟಿಯ ದಿಗಂತದ ಮೇಲೆ ಪ್ರಕಾಶಿಸಿರುವುದೆಂದೂ ನಾನು ಸಾಕ್ಷಿ ನುಡಿಯುತ್ತೇನೆ. ಅದೂ ಅಲ್ಲದೆ, ನಿನ್ನ ಲೇಖನಿಯ ಕೇವಲ ಒಂದು ಚಲನೆ ಮಾತ್ರದಿಂದ ನಿನ್ನಾಜ್ಞೆಯಾದ ‘ನೀನಿರು’ ಜಾರಿಗೆ ಬಂದಿರುವುದಕ್ಕೂ ಮತ್ತು ದೇವರ ನಿಗೂಢ ರಹಸ್ಯವು ಪ್ರಕಟಗೊಂಡಿರುವುದಕ್ಕೂ; ಮತ್ತು ಎಲ್ಲಾ ಸೃಷ್ಟಿಗಳು ಅಸ್ತಿತ್ವಕ್ಕೆ ಬರುವಂತೆ ಕರೆ ನೀಡಿರುವುದಕ್ಕೂ ಹಾಗೂ ಎಲ್ಲಾ ಪ್ರಕಟಣೆಗಳನ್ನು ಭೂಮಿಯ ಮೇಲೆ ಕಳುಹಿಸಲಾಗಿದ್ದಕೂ ನಾನು ಸಾಕ್ಷಿ ನುಡಿಯುತ್ತೇನೆ.

ಇಷ್ಟೂ ಅಲ್ಲದೆ, ನಿನ್ನ ಸೌಂದರ್ಯದಿಂದಲೇ ಪೂಜಿಸಲ್ಪಟ್ಟವನ ಸೌಂದರ್ಯವು ಅನಾವರಣವಾಯಿತೆಂದೂ, ನಿನ್ನ ಮುಖದಿಂದಲೇ ಅಪೇಕ್ಷಿಸಲ್ಪಟ್ಟವನ ಮುಖಾರವಿಂದವು ಶೋಭಿತಗೊಂಡಿತೆಂದೂ, ಹಾಗೂ ಸೃಷ್ಟಿಗಳ ಮಧ್ಯೆ, ನಿನ್ನ ಭಕ್ತರು ವೈಭವದ ಶಿಖರಕ್ಕೇರುವ ಹಾಗೂ ದೈವ ಪ್ರತಿಭಟಕರು ಪಾತಾಳಕ್ಕಿಳಿಯುವ ನಿರ್ಣಯವು ನಿನ್ನ ಒಂದು ನುಡಿಯ ಮೂಲಕ ಆಯಿತೆಂಬುದಕ್ಕೂ ನಾನೇ ಸಾಕ್ಷಿಯಾಗಿದ್ದೇನೆ. ಯಾರು ನಿನ್ನನ್ನು ಅರಿತಿದ್ದಾನೋ ಅವನು ದೇವರನ್ನು ಅರಿತಿದ್ದಾನೆ, ಹಾಗೂ ಸಾನ್ನಿಧ್ಯವನ್ನು ಪಡೆದಿದ್ದಾನೆ, ಎಂಬುದಕ್ಕೆ ನಾನೇ ಸಾಕ್ಷಿ. ಆದ್ದರಿಂದ, ಯಾರು ನಿನ್ನಲ್ಲಿ ಮತ್ತು ನಿನ್ನ ಚಿಹ್ನೆಗಳಲ್ಲಿ ವಿಶ್ವಾಸವಿಟ್ಟಿರುವನೋ, ಹಾಗೂ ನಿನ್ನ ಸಾರ್ವಭೌಮತ್ವದ ಮುಂದೆ ವಿನೀತನಾಗಿರುವನೋ, ನಿನ್ನನ್ನು ಭೇಟಿ ಮಾಡುವ ಗೌರವವನ್ನು ಪಡೆದಿರುವನೋ, ಹಾಗೂ ನಿನ್ನ ಇಚ್ಛೆಯ ಆನಂದವನ್ನು ಪಡೆದಿರುವನೋ, ಹಾಗೂ ನಿನ್ನ ಪ್ರದಕ್ಷಿಣೆ ಮಾಡಿರುವನೋ, ಮತ್ತು ನಿನ್ನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನ್ಯತೆಯೇ ಮಹಾನ್, ಯಾರು ನಿನ್ನನ್ನು ಉಲ್ಲಂಘಿಸಿರುವನೋ, ನಿನ್ನನ್ನು ಅಲ್ಲಗಳೆದಿರುವನೋ, ನಿನ್ನ ಚಿಹ್ನೆಗಳನ್ನು ನಿರಾಕರಿಸಿರುವನೋ, ನಿನ್ನ ಪ್ರಭುತ್ವವನ್ನು ವಿರೋಧಿಸಿರುವನೋ, ನಿನ್ನ ವಿರುದ್ಧಿ ಎದ್ದಿರುವನೋ, ನಿನ್ನ ಮುಖಾರವೈಂದದೆದುರು ಅಹಂಕಾರವನ್ನು ತೋರ್ಪಡಿಸಿರುವನೋ, ನಿನ್ನ ಸಾಕ್ಷ್ಯಾಧಾರಗಳನ್ನು ಖಂಡಿಸಿರುವನೋ, ನಿನ್ನ ಶಾಸನ ಮತ್ತು ನಿನ್ನ ಸಾಮ್ರಾಜ್ಯದಿಂದ ದೂರ ಸರಿದಿರುವನೋ, ನಿನ್ನ ಪವಿತ್ರ ಶಾಸನಗಳಲ್ಲಿ ನಿನ್ನ ಆಜ್ಞೆಯ ಬೆರಳುಗಳಿಂದ ಕೊರೆಯಲ್ಪಟ್ಟ ದೈವಪ್ರತಿಭಟಕರಲ್ಲಿ ಯಾರ ಹೆಸರು ಎಣಿಸಲ್ಪಟ್ಟಿದೆಯೋ ಅಂಥವರಿಗೆ ಸಂಕಟಗಳು ಬರಲಿ.

ಓ ನನ್ನ ದೇವರೇ ಮತ್ತು ನನ್ನ ಪ್ರಿಯತಮನೇ, ನಿನ್ನ ಕರುಣೆಯ ಬಲಗೈಯಿಂದ ಮತ್ತು ನಿನ್ನ ಪ್ರೇಮಪೂರಿತ ದಯೆಯಿಂದ ನಿನ್ನ ಅನುಗ್ರಹಗಳ ಉಸಿರಿನ ತಂಗಾಳಿಯನ್ನು ನನ್ನ ಮೇಲೆ ಹರಿಸು ಅದರಿಂದ ಅವು ನನ್ನನ್ನು ನನ್ನಿಂದ ಮತ್ತು ಈ ಲೋಕದಿಂದ ದೂರ ಮಾಡಿ ನಿನ್ನ ಸಾಮೀಪ್ಯ ಹಾಗೂ ನಿನ್ನ ಸಾನ್ನಿಧ್ಯದ ಆಸ್ಥಾನಗಳೆಡೆ ಕರೆದೊಯ್ಯಲಿ, ನಿನ್ನಿಚ್ಛೆಯಂತೆಯೇ ಮಾಡುವ ಸಾಮಥ್ರ್ಯವುಳ್ಳವನು ನೀನೇ. ನಿಜವಾಗಿಯೂ, ನೀನು ಎಲ್ಲಾ ವಸ್ತುಗಳ ಮೇಲೂ ಶ್ರೇಷ್ಠನಾಗಿದ್ದೀಯೇ. ದೇವರ ಸ್ಮರಣೆ, ಆತನ ಪ್ರಶಂಸೆ, ದೇವರ ಜ್ಯೋತಿ ಹಾಗೂ ಆತನ ಭವ್ಯತೆಯು ಆತನ ಸೌಂದರ್ಯನಾಗಿರುವ ನಿನ್ನ ಮೇಲಿರಲಿ! ಸೃಷ್ಠಿಯ ಕಣ್ಣುಗಳು ದಬ್ಬಾಳಿಕೆಗೊಳಪಟ್ಟ ನಿನ್ನಂಥವವನ್ನು ಎಂದೂ ನೋಡಿರಲಿಕ್ಕಿಲ್ಲ ಎಂಬುದಕ್ಕೆ ನಾನೇ ಸಾಕ್ಶಿ. ನಿನ್ನ ಬಾಳಿನ ಎಲ್ಲಾ ದಿನಗಳಲ್ಲೂ ನೀನು ಯಾತನೆಗಳ ಸಾಗರದ ತರದಲ್ಲಿ ಮುಳುಗಿದ್ದೆ. ಒಂದು ಸಮಯದಲ್ಲಿ ನೀನು ನಿನ್ನ ಶತ್ರುಗಳ ಖಡ್ಗಗಳಿಂದ ಬೆದರಿಸಲ್ಪಟ್ಟಿದ್ದೆ. ಇಷ್ಟೆಲ್ಲಾ ಆದರೂ, ನಿನಗೆ ಸರ್ವಜ್ಞ ಹಾಗೂ ಸರ್ವಪ್ರಜ್ಞನು ವಿಧಿಸಲ್ಪಟ್ಟಿರುವುದನ್ನು ಮನುಷ್ಯರೆಲ್ಲರೂ ಆಚರಿಸುವಂತೆ ನೀನು ಆಜ್ಞೆ ಮಾಡಿರುವೆ.
ನನ್ನ ಚೈತನ್ಯವು ನೀನನುಭವಿಸಿದ ನಿಂದನೆಗೆ ಅಹುತಿಯಾಗಲಿ ಮತ್ತು ನನ್ನ ಆತ್ಮವು ನೀನು ಸಹಿಸಿರುವ ವಿಪತ್ತುಗಳ ವಿಮುಕ್ತಿಯ ಬೆಳೆಯಾಗಲಿ. ನಿನ್ನಿಂದ ಹಾಗೂ ನಿನ್ನ ಮುಖಾರವಿಂದದ ಪ್ರಕಾಶದ ವೈಭವದಿಂದ ಯಾರ ಮುಖಗಳು ಪ್ರಕಾಶಿತಗೊಂಡವೋ, ಅವರಿಂದ ಹಾಗೂ ಯಾರು ನಿನ್ನ ಪ್ರೀತಿಗೋಸ್ಕರವಾಗಿ ಅವರಿಗೆ ಆಜ್ಞಾಪಿಸಿರುವುದನ್ನೆಲ್ಲಾ ಆಚರಿಸುವರೋ ಅವರಿಂದ, ನೀನು ಮತ್ತು ನಿನ್ನ ಸೃಷ್ಟಿಗಳ ನಡುವೆ ಬಂದಿರುವ ಪರದೆಗಳನ್ನು ತೆಗೆದುಹಾಕುವಂತೆಯೂ ಹಾಗೂ ಈ ಪ್ರಪಂಚ ಮತ್ತು ಮುಂದಿನ ಪ್ರಪಂಚದ ಒಳ್ಳೆಯದನ್ನು ದಯಪಾಲಿಸೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನೀನು ಸತ್ಯವಾಗಿಯೂ ಸರ್ವಶಕ್ತನೂ, ಪರಮೋತ್ತಮನೂ, ಸಕಲ ವೈಭವಪೂರಿತನೂ, ಸದಾ ಕ್ಷಮಾಶೀಲನೂ, ಮಹಾಕೃಪಾಕರನೂ ಆಗಿರುವೆ. ಓ ಪ್ರಭುವೇ, ನನ್ನ ದೇವರೇ, ದಿವ್ಯ ಕಲ್ಪವೃಕ್ಷ ಮತ್ತದರ ಎಲೆಗಳು, ಮತ್ತದರ ಟೊಂಗೆಗಳು, ಮತ್ತದರ ರೆಂಬೆಗಳು, ಮತ್ತದರ ಕಾಂಡಗಳು, ಮತ್ತದರ ಉಪಶಾಖೆಗಳು ನಿನ್ನ ಮಹಾಉಪಾಧಿಗಳಿರುವ ತನಕ ಹಾಗೂ ನಿನ್ನ ಪ್ರಭಾವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕ್ರಮಣಕಾರರ ಹಾವಳಿ ಮತ್ತು ನಿರಂಕುಶಾಧಿಕಾರವುಳ್ಳ ಅತಿಥೇಯರಿಂದ ಅದನ್ನು ರಕ್ಷಿಸು. ನೀನು, ಸತ್ಯವಾಗಿಯೂ, ಪರಾಕ್ರಮಶಾಲಿಯೂ, ಮಹಾಬಲನೂ ಆಗಿರುವೆ. ನಿನ್ನನ್ನು ಪಡೆದ ನಿನ್ನ ಸೇವಕರನ್ನು ಹಾಗೂ ನಿನ್ನ ಸೇವಕಿಯರನ್ನು ಹರಸು, ಓ ಪ್ರಭುವೇ ನನ್ನ ದೇವರೇ, ಸತ್ಯವಾಗಿಯೂ ನೀನು ಸರ್ವ ಉದಾರಿ, ನಿನ್ನ ಅನುಗ್ರಹ ಅಪಾರ. ಸರ್ವಕ್ಷಮಾಶೀಲನೂ ಪರಮದಾನಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.

*(ಟೆಹರಾನಿನ ಸಿಯಾಚಾಲ್ ಕಪ್ಪುಗುಂಡಿಯಲ್ಲಿ ಬಂಧಿತ ಬಾಬಿಗಳು ಪಠಿಸುತ್ತಿದ್ದ ಮಂತ್ರ: ದೇವರು ನನಗೆ ತೃಪ್ತಿಪಡಿಸುವಷ್ಟಿದ್ದಾನೆ; ನಿಶ್ಚಯವಾಗಿಯೂ, ಆತನು ಸರ್ವಸಂತೃಪ್ತದಾತನು! ವಿಶ್ವಾಸವಿರುವವರು ಆತನಲ್ಲಿ ವಿಶ್ವಾಸವನ್ನಿಡಲಿ.

BH03262 BH03262

Add range:
ಓ ನನ್ನ ದೇವರೇ, ಯಾರು ಎಲ್ಲ ವೈಭವ ಮತ್ತು ಭವ್ಯತೆಯ, ಮಹತ್ವ ಮತ್ತು ಗೌರವದ, ಸೌರ್ವಭೌಮತ್ವ ಮತ್ತು ಪ್ರಭುತ್ವದ, ಔನ್ನತ್ಯ ಮತ್ತು ದಯೆಯ, ಗಂಭೀರತೆ ಮತ್ತು ಶಕ್ತಿಯ ಮೂಲನಾಗಿರುವನೋ, ಅವನ ಸರ್ವ ಪ್ರಶಂಸೆಯಾಗಲಿ. ನೀನು ಯಾರನ್ನು ಇಚ್ಛಿಸುವೆಯೋ ಅವರನ್ನು ಅತ್ಯಂತ ಮಹಾಸಾಗರದ ಬಳಿಗೆ ಕರೆದೊಯ್ಯುವಂತೆ ಮಾಡುವೆ, ಹಾಗೂ ಯಾರನ್ನು ನೀನು ಇಚ್ಛಿಸುವೆಯೋ ಅವರ ಮೇಲೆ ನಿನ್ನ ಅತಿ ಪುರಾತನ ನಾಮವನ್ನು ಗುರುತಿಸುವ ಗೌರವವನ್ನು ನೀನು ಅನುಗ್ರಹಿಸುವೆ. ಸ್ವರ್ಗದಲ್ಲಿರುವವರಾಗಲೀ ಮತ್ತು ಭೂಮಿಯಲ್ಲಿರುವವರಾಗಲೀ, ಯಾರು ನಿನ್ನ ಸಾರ್ವಭೌಮ ಇಚ್ಛೆಯನ್ನು ಪೂರೈಸುವುದನ್ನು ತಡೆಹಿಡಿಯಲಾರರು. ಚಿರಂತನ ಸಮಯದಿಂದಲೂ ಸಮಸ್ತ ಸೃಷ್ಟಿಯನ್ನು ನೀನು ಆಳುತ್ತಿರುವೆ ಹಾಗೂ ಎಂದೆಂದಿಗೂ ಎಲ್ಲಾ ಸೃಷ್ಟಿಯ ಮೇಲೂ ನಿನ್ನ ಪ್ರಭುತ್ವವನ್ನು ಚಲಾಯಿಸುವೆ. ಸರ್ವಶಕ್ತನೂ, ಮಹೋನ್ನತನೂ, ಸರ್ವಪ್ರಬಲನೂ, ಸರ್ವವಿವೇಕಿಯೂ ಆದ ನೀನಲ್ಲದೆ ಅನ್ಯ ದೇವರಿಲ್ಲ. ಓ ಪ್ರಭುವೇ, ನಿನ್ನನ್ನು ನೋಡುವಂತೆ ನನ್ನ ಸೇವಕರ ಮುಖಗಳನ್ನು ಬೆಳಗಿಸು ನಿನ್ನ ಸ್ವರ್ಗೀಯವಾದ ಕೃಪೆಗಳತ್ತ ಅವರು ತಿರುಗುವಂತೆ ಹಾಗೂ ಸ್ವಯಂ ನಿನ್ನ ಪ್ರಕಟಣೆ ಹಾಗೂ ನಿನ್ನ ಸಾರಸತ್ವದ ದಿನ ಚಿಲುಮೆಯಾಗಿರುವವನನ್ನು ಗುರುತಿಸುವಂತೆ ಅವರ ಹೃದಯಗಳನ್ನು ಸ್ವಚ್ಛಗೊಳಿಸು. ಸತ್ಯವಾಗಿಯೂ, ಎಲ್ಲಾ ಪ್ರಪಂಚಗಳ ಪ್ರಭು ನೀನಾಗಿರುವೆ. ಅನಿರ್ಬಂಧಿತನೂ, ಸರ್ವನಿಗ್ರಹಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.

BH04569 BH04569

Add range:
ಓ ಪ್ರಭು ನನ್ನ ದೇವರೇ! ದುರ್ಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನಿನ್ನೆಡೆಗೆ ತಿರುಗುವ ಅಸಹಾಯಕರ ಉದ್ಧಾರಕನೂ ನೀನೇ. ಪರಮ ದೀನನಾಗಿ, ನಿನ್ನ ಸೌಂದರ್ಯದ ಸಾಮ್ರಾಜ್ಯದತ್ತ ನನ್ನ ನಮ್ರ ಕೈಗಳನ್ನು ಚಾಚಿ ನನ್ನ ಅಂತರ್ ನಾಲಿಗೆಯಿಂದ ನಿನ್ನಲ್ಲಿ ಅತ್ಯುತ್ಸಾಹದಿಂದ ಈ ರೀತಿ ಬಿನ್ನವಿಸುತ್ತಿದ್ದೇನೆ. ಓ ದೇವರೇ, ನನ್ನ ದೇವರೇ! ನಿನ್ನನ್ನು ಆರಾಧಿಸುವಂತೆ ನನಗೆ ಸಹಾಯನೀಡು. ನಿನ್ನ ಸೇವೆಗೈಯ್ಯುವಂತೆ ನನ್ನ ಟೊಂಕವನ್ನು ಭದ್ರಪಡಿಸು; ನಿನಗಾಗಿ ನನ್ನ ಸೇವೆಯಲ್ಲಿ ನಿನ್ನ ಅನುಗ್ರಹದ ನೆರವು ನೀಡು; ನಿನಗೆ ವಿಧೇಯನಾಗಿರುವಲ್ಲಿ ನಾನು ದೃಢನಾಗಿರುವಂತೆ ನನಗೆ ಕಷ್ಟಗಳನ್ನೊದಗಿಸು; ನನ್ನ ಮೇಲೆ ನಿನ್ನ ಉದಾತ್ತ ಔದಾರ್ಯವನ್ನು ಉಕ್ಕಿ ಹರಿಯುವಂತೆ ಎಸಗು. ನಿನ್ನ ಪ್ರೇಮಪೂರಿತ ದಯಾದೃಷ್ಟಿಯನ್ನು ನನ್ನತ್ತ ಬೀರು ಹಾಗೂ ನಿನ್ನ ಕೃಪಾಸಾಗರದಲ್ಲಿ ನನ್ನನ್ನು ಮುಳುಗಿಸು. ನಿನ್ನ ಧರ್ಮದಲ್ಲಿ ನನ್ನ ಸ್ವಾಮಿನಿಷ್ಠೆಯ ಬಗ್ಗೆ ನಾನು ದೃಢನಾಗಿರುವಂತೆ ಅನುಗ್ರಹಿಸು. ನಿಶ್ಚಯತೆ ಹಾಗೂ ಭರವಸೆಯ ಪೂರ್ಣ ಪ್ರಮಾಣವನ್ನು ನನ್ನ ಮೇಲೆ ಕರುಣಿಸು, ಆದರಿಂಡ ನಾನು ಈ ಪ್ರಪಂಚದಿಂದ ಸಂಪೂರ್ಣವಾಗಿ ಮುಕ್ತನಾಗಬಹುದು, ನಿನ್ನ ಮುಖಾರವಿಂದದೆಡೆ ನನ್ನ ಪೂರ್ಣ ಭಕ್ತಿಯ ಮುಖವನ್ನು ತಿರುಗಿಸಬಹುದು, ಸಾಕ್ಷ್ಯ ಮತ್ತು ಪುರಾವೆಗಳ ನಿರ್ಬಂಧಿತ ಶಕ್ತಿಯಿಂದ ಬಲಯುತಗೊಳ್ಳಬಹುದು, ಹಾಗೂ ಭವ್ಯತೆ ಮತ್ತು ಬಲದಿಂದೊಡಗೂಡಿ ಭೂಲೋಕ ಮತ್ತು ಸ್ವರ್ಗದ ಪ್ರತಿಯೊಂದು ಪ್ರದೇಶವನ್ನು ಮೀರಿ ಹೋಗಬಹುದು. ಸತ್ಯವಾಗಿಯೂ ನೀನು ಕೃಪಾಳುವೂ, ಸರ್ವ ವೈಭವಶಾಲಿಯೂ, ದಯಾಳುವೂ, ಕರುಣಾಕರನೂ ಆಗಿರುವೆ. ಓ ಪ್ರಭುವೇ! ಇವರು ಹುತಾತ್ಮರ ಜೊತೆಗಿದ್ದು ಬದುಕುಳಿದ, ಪವಿತ್ರ ಆತ್ಮಗಳ ಒಡನಾಡಿಗಳು. ಅವರು ಒಂದೊಂದು ಯಾತನೆಯನ್ನೂ ಸಹಿಸಿದ್ದರಲ್ಲದೆ ಘೋರ ಅನ್ಯಾಯವನ್ನು ಎದುರಿಸುವಲ್ಲಿ ಸಹನೆಯನ್ನು ಪ್ರದರ್ಶಿಸಿದ್ದರು. ಅವರು ಸಕಲ ಸೌಕರ್ಯ ಹಾಗೂ ಸಮೃದ್ಧಿಯನ್ನು ಪರಿತ್ಯಜಿಸಿರುವರು. ನಿನ್ನ ಪ್ರೀತಿಯ ಮಾರ್ಗದಲ್ಲಿ ದಾರುಣ ವೇದನೆ ಮತ್ತು ವಿಪತ್ತುಗಳಿಗೆ ಸ್ವಇಚ್ಛೆಯಿಂದ ಒಳಪಡಿಸಿರುವರು, ನಿನ್ನ ನೇರವಾದ ಪಥದಲ್ಲಿ ಅವರು ದೃಢವಾಗಿ ನಡೆಯುತ್ತಿರುವುದರಿಂದ ಅವರಿನ್ನೂ ಶತ್ರುಗಳ ಬಿಗಿ ಹಿಡಿತದಲ್ಲಿ ಬಂಧಿಯಾಗಿದ್ದು. ಸತತವಾದ ಭಯಂಕರ ಯಾತನೆಗೊಳಪಟ್ಟು ಹಿಂಸಿಸಲ್ಪಟ್ಟಿರುವರು. ಅವರಿಗೆ ನೆರವು ನೀಡುವವರ್ಯಾರು ಇಲ್ಲ. ಅವರ ಮಿತೃತ್ವ ಬಯಸುವವರ್ಯಾರೂ ಇಲ್ಲ. ತುಚ್ಛ ಮತ್ತು ಅಧರ್ಮಿಗಳಲ್ಲದೆ ಅವರೊಡನೆ ಬೆರೆಯಲು ಮತ್ತು ಸಮರಸದಿಂದಿರಲು ಯಾರೊಬ್ಬರೂ ಇಲ್ಲ. ಓ ಪ್ರಭುವೇ! ಈ ಆತ್ಮಗಳು ಈ ಪ್ರಾಪಂಚಿಕ ಜೀವನದಲ್ಲಿ ಕಹಿಯಾದ ವ್ಯಥೆಯನ್ನು ಸವಿದಿರುವರು ಮತ್ತು ನಿನ್ನ ಸ್ವರ್ಗೀಯ ಸಾಮ್ರಾಜ್ಯವನ್ನು ಸೇರುವ ತವಕದಲ್ಲಿ, ನಿನ್ನ ಮುಖಾರವಿಂದದ ಕಂಗೊಳಿಸುವ ಸೌಂದರ್ಯದ ಪ್ರೀತಿಯ ಕುರುಹಾಗಿ, ಪೀಡಕರು ಅವರ ಮೇಲೆ ಹೇರಿದ ಭೀಭತ್ಸ ಅಪಮಾನವನ್ನು ಅವರು ಸಹಿಸಿರುವರು. ಓ ಪ್ರಭುವೇ! ಅವರ ಕಿವಿಗಳನ್ನು ದೈವೀ ನೆರವಿನ ಹಾಗೂ ಶೀಘ್ರ ವಿಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕ್ತಿಯಿಂದ ಅಧಿಕಾರ ಚಲಾಯಿಸುವವರ ಹಿಂಸೆಯಿಂದ ಅವರನ್ನು ಮುಕ್ತಗೊಳಿಸು. ಅಧರ್ಮಿಗಳ ಕೈಗಳನ್ನು ತಡೆಹಿಡಿ, ಈ ಆತ್ಮಗಳನ್ನು ಅನಾಗರಿಕ ಕ್ರೂರಿಗಳ ಉಗುರುಗಳು ಮತ್ತು ಹಲ್ಲುಗಳಿಂದ ಸೀಳುವಂತೆ ಮಾಡು. ಏಕೆಂದರೆ, ನಿನ್ನ ಮೇಲಿನ ಪ್ರೀತಿಯಿಂದ ಅವರು ಮರುಳಾಗಿರುವರು, ನಿನ್ನ ಪವಿತ್ರತೆಯ ರಹಸ್ಯಗಳನ್ನು ಒಪ್ಪಿಕೊಂಡಿರುವವರಾಗಿ, ನಿನ್ನ ದ್ವಾರದಲ್ಲಿ ವಿನೀತರಾಗಿ ನಿಂತಿರುವರು ಹಾಗೂ ನಿನ್ನ ಪರಮೋತ್ತಮ ಆವರಣವನ್ನು ಸೇರಿದವರಾಗಿರುವರು. ಓ ಪ್ರಭುವೇ! ನವ ಚೈತನ್ಯದಿಂದ ಅವರನ್ನು ಉದಾರವಾಗಿ ಬಲಪಡಿಸು; ರಾತ್ರಿಯ ಮಬ್ಬು ಕತ್ತಲಿನಲ್ಲಿ ನಿನ್ನ ಅದ್ಭುತವಾದ ಪುರಾವೆಗಳನ್ನೂ ವೀಕ್ಷಿಸುವಂತೆ ಮಾಡಲು ಅವರ ಕಣ್ಣುಗಳನ್ನು ಪ್ರಜ್ವಲಿಸು; ಸನಾತನ ರಹಸ್ಯಗಳಿಂದ ತುಂಬಿದ ನಿನ್ನ ಸಾಮ್ರಾಜ್ಯದಲ್ಲಿ ಸಮೃದ್ಧವಾಗಿರುವ ಎಲ್ಲಾ ಒಳ್ಳೆಯದನ್ನು ಅವರಿಗಾಗಿ ಗೊತ್ತುಪಡಿಸು; ಎಲ್ಲಾ ಪ್ರದೇಶಗಳ ಮೇಲೂ ದೇದೀಪ್ಯಮಾನವಾಗಿ ಹೊಳೆಯುವ ನಕ್ಷತ್ರದಂತೆಯೂ, ಫಲಭರಿತ ಸಮೃದ್ಧ ವೃಕ್ಷಗಳಂತೆಯೂ ಹಾಗೂ ಮುಂಜಾವಿನ ತಂಗಾಳಿಯಲ್ಲಿ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನಿಜವಾಗಿಯೂ, ನೀನು ಉದಾರಿಯೂ, ಪ್ರಬಲನೂ, ಸರ್ವಶಕ್ತನೂ, ಅನಿರ್ಬಂಧಿತನೂ, ಆಗಿರುವೆ. ಪ್ರೀತಿ ಹಾಗೂ ಸುಕೋಮಲ ಕರುಣೆಯ, ಸರ್ವ ವೈಭವಶಾಲಿ, ಸರ್ವದಾ ಕ್ಷಮಾಶೀಲ ದೇವರಿಲ್ಲದೆ ಅನ್ಯ ದೇವರಿಲ್ಲ.