Selections from the Writings of 'Abdu'l-Bahá

Kannada · 'Abdu'l-Bahá

Ziyarat-Namih (Tablet of Visitation) AB03082

Add range:

*(ಅಬ್ದುಲ್ ಬಹಾ ಅವರ ಸಮಾಧಿ ಬಳಿ ಸಲ್ಲಿಸುವ ಪ್ರಾರ್ಥನೆ ಇದು. ಏಕಾಂತವಾಗಿಯೂ ಈ ಪ್ರಾರ್ಥನೆಯನ್ನು ಸಲ್ಲಿಸುವುದುಂಟು ಅಬ್ದುಲ್ ಬಹಾ ಹೀಗೆ ಹೇಳಿದ್ದಾರೆ: *“ಯಾರು ಈ ಪ್ರಾರ್ಥನೆಯನ್ನು ನಮ್ರತೆಯಿಂದಲು ನಿಷ್ಠೆಯಿಂದಲು ಸಲ್ಲಿಸುವರೋ ಅವರು ಈ ಸೇವಕನ ಆತ್ಮಕ್ಕೆ ಸಂತೋಷ ಮತ್ತು ಹರ್ಷವನ್ನುಂಟುಮಾಡುವರು. ಅವನನ್ನು ಸಮಕ್ಷಮ ದರ್ಶನ ಮಾಡಿದಂತೆಯೇ ಆದೀತು.”)

ಅವನು ಅಖಂಡ ಪುಣ್ಯ ಪುರುಷ! ಓ ದೇವರೇ, ನನ್ನ ದೇವರೇ! ವಿನಯನಾಗಿ ಕಣ್ಣೀರು ಸುರಿಸುತ್ತಾ ನಿನ್ನತ್ತ ನನ್ನ ಕೈಗಳನ್ನು ಜೋಡಿಸಿ, ನಿನ್ನ ಪಾದಧೂಳಿಯಿಂದ ನನ್ನ ಮುಖವನ್ನು ಲೇಪಿಸಿಕೊಂಡು ಪ್ರಾರ್ಥಿಸಿಕೊಳ್ಳುವವನಾಗಿದ್ದೇನೆ. ಸರ್ವ ಪ್ರಜ್ಞತೆ ಹಾಗೂ ಮಹಿಮೆಯನ್ನು ಸ್ತುತಿಸುತ್ತಾ ನಿಂತಿದ್ದೇನೆ. ನಿನ್ನ ದ್ವಾರದ ಮುಂದೆ ನಮ್ರತೆ ಹಾಗೂ ವಿನೀತಭಾವದಿಂದ ನಿಂತಿರುವ ನಿನ್ನ ಸೇವಕನನ್ನು ದಯಾಮಯ ದೃಷ್ಟಿಯಿಂದ ಕಾಣು. ನಿನ್ನ ಅನಂತ ಕಾರುಣ್ಯದ ಸಾಗರದಲ್ಲಿ ಮುಳುಗಿಸು. ಪ್ರಭುವೇ, ಅವನು ಬಡವ ಹಾಗೂ ನಮ್ರತೆಯ ನಿನ್ನ ಸೇವಕ. ದಾಸ್ಯಭಾವದಿಂದ ನಿನ್ನ ಸೆರೆಯಾಳಾಗಿ ಮೊರೆಯಿಡುತ್ತಿದ್ದಾನೆ. ನಿಷ್ಠೆಯಿಂದ ನಿನ್ನಲ್ಲಿ ಪ್ರಾರ್ಥಿಸುತ್ತಿದ್ದಾನೆ. ನಿನ್ನಲ್ಲಿ ಪೂರ್ಣ ವಿಶ್ವಾಸವನ್ನಿಟ್ಟು, ನಿನ್ನ ಮುಂದೆ ಕಣ್ಣೀರು ಸುರಿಸುತ್ತಾ ಕೋರುತ್ತಾ ಬೇಡುತ್ತಾ ಹೀಗೆ ನುಡಿಯುತ್ತಾನೆ: ದೇವರೇ, ಓ ನನ್ನ ದೈವವೇ, ನಿನಗೆ ಪ್ರೀತಿಪಾತ್ರರಾದವರ ಸೇವೆ ಸಲ್ಲಿಸಲು ಕೃಪೆಮಾಡು. ನಿನ್ನ ಸೇವೆಗಾಗಿ ಶಕ್ತಿ ಬಲಪಡಿಸು. ನಿನ್ನನ್ನು ಗೌರವಿಸುವಲ್ಲಿ ನನ್ನ ದೃಷ್ಟಿಯನ್ನು ಬೆಳಗಿಸು. ಶೋಭಾಯಮಾನವಾದ ನಿನ್ನ ಪ್ರದೇಶದ ಸಲುವಾಗಿ ಒಳಿತನ್ನು ಕೋರುವಂತೆ ಮಾಡು. ಸ್ವಾರ್ಥರಹಿತನಾಗಿರಲು ಸಹಾಯ ನೀಡು. ನಿನ್ನ ಸ್ವರ್ಗ ಸದೃಶವಾದ ಪ್ರವೇಶ ದ್ವಾರದಲ್ಲಿ ನಿಃಸ್ವಾರ್ಥ ಬುದ್ಧಿಯಿಂದ ಇರುವಂತೆ ಅವಕಾಶ ಕಲ್ಪಿಸು. ನಿನ್ನ ಪವಿತ್ರ ಪರಿಸರದಲ್ಲಿ ಎಲ್ಲ ವಸ್ತುಗಳಿಂದಲು ಅಲಿಪ್ತನಾಗಿರುವಂತೆ ಮಾಡು. ಸ್ವಾಮಿಯೇ, ಸ್ವಾರ್ಥದಿಂದ ಅತೀತವಾದ ಬಟ್ಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸ್ತ್ರವನ್ನು ನನಗೆ ತೊಡಿಸು. ಅದರ ಸಾಗರದಲ್ಲಿ ನನ್ನನ್ನು ಮುಳುಗಿಸು. ನಿನ್ನ ಪ್ರೀತಿಪಾತ್ರರ ಮಾರ್ಗದಲ್ಲಿನ ಧೂಳನ್ನಾಗಿ ನನ್ನನ್ನು ಮಾಡು. ವೈಭವ ಮೇರುವಿನ ಓ ಪ್ರಭುವೇ, ನಿನ್ನ ವಿಶ್ವಾಸಗಳಿಸಿದವರಿಂದ ಪಾವನವಾಗಿರುವ ಭೂಮಿಗೆ ನನ್ನ ಆತ್ಮವನ್ನು ಸಮರ್ಪಿಸುವಂತೆ ಒತ್ತಾಸೆ ನೀಡು. ಈ ಪ್ರಾರ್ಥನೆಯಿಂದ ಉಷಃ ಕಾಲದಲ್ಲಿ ಮತ್ತು ರಾತ್ರಿಯಲ್ಲಿ ನಿನ್ನ ಸೇವಕ ನಿನ್ನನ್ನು ಅರಸುತ್ತಿದ್ದಾನೆ. ಅವನ ಆಕಾಂಕ್ಷೆಯನ್ನು ಈಡೇರಿಸು. ಅವನ ಆತ್ಮವನ್ನು ಪ್ರಜ್ವಲಿಸು. ಅವನ ಎದೆ ಆನಂದದಿಂದ ಉಬ್ಬುವಂತೆ ಮಾಡು. ಜ್ಯೋತಿಯನ್ನು ಬೆಳಗಿಸು. ಈ ಪ್ರಕಾರ ಅವನು ಮೂರ್ತಿವಂತನಾಗಿ ನಿನ್ನ ಹಾಗೂ ನಿನ್ನ ಸೇವಕರ ಸೇವೆ ಸಲ್ಲಿಸುವಂತೆ ಎಸಗು.
ನೀನು ದಾನಿ, ದಯಾಪರ ಉದಾರಿ ಘನತೆವೆತ್ತವ, ದಯಾಮಯ, ಕರುಣಾಸಾಗರ.